ದೈಹಿಕ ಚಟುವಟಿಕೆಗಳು  -
	ಓಡುವುದು, ಹಾರುವುದು ಅಥವಾ ನಿರ್ದಿಷ್ಟವಾದ ತೂಕ ಮತ್ತು ಆಕರಗಳುಳ್ಳ ವಸ್ತುಗಳನ್ನು ಎಸೆಯುವುದು ಮುಂತಾದ ಚಟುವಟಿಕೆಗಳಿಗೆ ಈ ಹೆಸರಿದೆ (ಅತ್ಲೆಟಿಕ್ಸ್). ಸಾಧಾರಣವಾಗಿ ಇವು ಹವ್ಯಾಸಿಗಳಿಗೆ ಮತ್ತು ಪ್ರಯೋಗಶೀಲರಿಗೆ ಮಾತ್ರ ಮೀಸಲಾಗಿರುತ್ತವೆ. ಪಾಶ್ಚಾತ್ಯ ದೇಶಗಳಲ್ಲಿ ವೃತ್ತಿಆಟಗಾರರು ಈ ರೀತಿಯ ಸ್ಪರ್ಧೆಗಳಲ್ಲಿ ಸಾಮಾನ್ಯವಾಗಿ ಭಾಗವಹಿಸುವುದಿಲ್ಲ. ಇವು ಹವ್ಯಾಸಿಗಳಿಗೇ ಮೀಸಲು. ಒಂದು ವೇಳೆ ಒಬ್ಬ ಹವ್ಯಾಸಿ ಅಟಗಾರ ವೃತ್ತಿ ಆಟಗಾರರೊಡನೆ ಪಣ ಒಡ್ಡಿ ಸ್ಪರ್ಧಿಸಿದರೆ ಅಥವಾ ಮುಂದೆ ಹವ್ಯಾಸಿ ಎನಿಸಲಾರ. ಸಾಧಾರಣವಾಗಿ ವಯಸ್ಸು ಕಳೆಯುತ್ತ ಬಂದಂತೆ ಹವ್ಯಾಸಿ ಆಟಗಾರರು ವೃತ್ತಿ ಆಟಗಾರರಾಗುತ್ತಾರೆ. ಅದರಲ್ಲೂ ವಿಶೇಷವಾಗಿ ದೈಹಿಕ ಚಟುವಟಿಕೆಗಳನ್ನು ಬೋಧಿಸುವ ಶಿಕ್ಷಕರಾಗಿ ಅದನ್ನೇ ಜೀವನೋಪಾಯವಾಗಿ ಮಾಡಿಕೊಳ್ಳುವ ಸಂದರ್ಭಗಳು ಬಹಳ ಮಟ್ಟಿಗೆ ಅವರಿಗೆ ಸಿಗುತ್ತವೆ.

	ಮಾನವ ಸಂಸ್ಕøತಿಯಲ್ಲಿ ದೈಹಿಕ ಚಟುವಟಿಕೆಗಳಿಗೆ ಮಹತ್ತ್ವಪೂರ್ಣವಾದ ಸ್ಥಾನವಿದೆ. ಇವುಗಳಿಂದ ಜೀವನದ ಕಷ್ಟಕಾರ್ಪಣ್ಯಗಳನ್ನು ಮರೆತು ಬದುಕನ್ನು ಹಗುರಾಗಿಸಿಕೊಳ್ಳಲು ಸಾಧ್ಯವೆಂಬ ಭಾವನೆ ಇರುವುದರಿಂದ ನಾಗರಿಕ ಹಾಗೂ ಅನಾಗರಿಕ ಎಂಬ ಭೇದವಿಲ್ಲದೆ ಎಲ್ಲ ಜನರಲ್ಲಿಯೂ ಇವಕ್ಕೆ ಹೆಚ್ಚಿನ ಸ್ಥಾನ ಸಿಕ್ಕಿದೆ.

	ಕ್ತಿಸ್ತಪೂರ್ವಕ್ಕೂ ಅನೇಕ ಶತಮಾನಗಳ ಹಿಂದೆ ಈಜಿಪ್ಟಿನವರು ಮತ್ತು ಸುತ್ತಮುತ್ತಲಿನ ದೇಶದವರು ಅಟಗಳನ್ನು ಆಡಲು ಪ್ರರಂಭಿಸಿದರು ಎನ್ನಲಾಗಿದೆ. ಐರ್ಲೆಂಡಿನಲ್ಲಿ ಆಟಗಳನ್ನು ಆಡಲು ಸುಮಾರು ಕ್ರಿ. ಪೂ. 1000 ದಲ್ಲಿಯೇ ಪ್ರಾರಂಭಿಸಿದ್ದರು ಎಂದು ಐತಿಹ್ಯ. ಹಿಂದಿನಿಂದ ಗ್ರೀಕರಲ್ಲಿ ರೋಮನರಲ್ಲಿ ಇಂಥ ಚಟುವಟಿಕೆಗಳಿಗೆ ಪ್ರಾಶಸ್ತ್ಯವಿತ್ತು.

	ದೈಹಿಕ ಚಟುವಟಿಕೆಗಳಿಗೆ ಸಂಪೂರ್ಣವಾಗಿ ಒಂದು ರೀತಿಯ ವ್ಯವಸ್ಥಿತವಾದ ಸ್ಥಾನವನ್ನು ಇತ್ತವರಲ್ಲಿ ಮೊದಲಿಗರೆಂದರೆ ಗ್ರೀಕರು. ಅವರ ನಾಗರಿಕ ಜೀವನ ವ್ಯವಸ್ತೆಯಲ್ಲಿ ಈ ರೀತಿಯ ಚಟುವಟಿಕೆಗಳಿಗೆ ಮತ್ತು ಆಟಪಾಠಗಳಿಗೆ ಮಹತ್ತ್ವಪೂರ್ಣವಾದ ಸ್ಥಾನವಿತ್ತು. ಸಾಮಾನ್ಯವಾಗಿ ಇಂಥ ಚಟುವಟಿಕೆಗಳು ಧಾರ್ಮಿಕ ಹಿನ್ನೆಲೆಯನ್ನು ಪಡೆದಿದ್ದವು. ಒಲಿಂಪಿಕ್, ಇಸ್ತೆಮಿಯ, ನಿಮಿಯಾನ್, ಸೈತಿಯಾನ್ ಎಂಬ ನಾಲ್ಕು ಗ್ರೀಕರ ಹಬ್ಬಗಳ ಸಂದರ್ಭಗಳಲ್ಲಿ ಧಾರ್ಮಿಕ ಆಚರಣೆಗಳ ಅಂಗವಾಗಿ ಈ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಇಲ್ಲಿ ಶಾರೀರಿಕ ಶ್ರಮದಿಂದಾಡುವ ಅಟಗಳು, ಕುಸ್ತಿ, ರಥಸ್ಪರ್ಧೆ ಮುಂತಾದವು ಮುಖ್ಯ ಆಕರ್ಷಣೆಗಳಾಗಿದ್ದವು. ಆಟಗಾರರಿಗೆ ದೀರ್ಘವಾದ ತೀಕ್ಷ್ಣವಾದ ತರಬೇತಿಯನ್ನು ನೀಡುತ್ತಿದ್ದರು. ಅಂದು ಕೆಲಮಟ್ಟಿಗೆ ಚಾಕಚಕ್ಯತೆಯನ್ನು ಕೌಶಲವನ್ನು ಗಳಿಸಿಕೊಳ್ಳುವುದಕ್ಕಿಂತಲೂ ವಿಶೇಷಾಗಿ ಶಕ್ತಿಯನ್ನು ದೇಹದಾಢ್ರ್ಯವನ್ನೂ ಬೆಳೆಸಿಕೊಳ್ಳುವವರಿಗೆ ಹೆಚ್ಚಿನ ಉತ್ತೇಜನ ಸಿಗುತ್ತಿತ್ತು. ಮಿಲೋ ಎಂಬಾತ ತನ್ನ ಮುಷ್ಟಿ ಪ್ರಹಾರದಿಂದ ಗೂಳಿಯನ್ನು ಕೊಂದು ಅದರ ಬೇಯಿಸಿದ ಮಾಂಸವನ್ನು ಇಪ್ಪತ್ತನಾಲ್ಕು ಗಂಟೆಗಳ ಅವಧಿಯಲ್ಲಿ ತಿಂದುಮುಗಿಸುವ ಸಾಮಥ್ರ್ಯವನ್ನು ಪಡೆದಿದ್ದನಂತೆ. ಇಂಥ ನುರಿತ ಆಟಗಾರರಿಗೆ ರಾಷ್ಟ್ರದ ಮನ್ನಣೆ ದೊರೆಯುತ್ತಿತ್ತು. ಒಲಿಂಪಿಕ್ ಆಟಗಳಲ್ಲಿ (ನೋಡಿ) ವಿಜಯಿಗಳಾಗುವುದು ಆ ಕಾಲದಲ್ಲಿಯೂ ತುಂಬ ಘನತೆಯ ಮಾತಾಗಿತ್ತು. ಆಟಗಾರರ ಬಗ್ಗೆ ಕವಿಗಳು ಪದ್ಯಗಳನ್ನು ಬರೆಯುತ್ತಿದ್ದರು. ಶಿಲ್ಪಿಗಳು ಅವರ ಮೂರ್ತಿಗಳನ್ನು ಕೆತ್ತುತ್ತಿದ್ದರು. ಅವರ ಜೀವನ ನಿರ್ವಹಣೆ ಮತ್ತು ಖರ್ಚು ವೆಚ್ಚಗಳನ್ನು ರಾಷ್ಟ್ರವೇ ನೋಡಿಕೊಳ್ಳುತ್ತಿತ್ತು. ಗ್ರೀಕ್ ಆಟಪಾಟಗಳ ಮತ್ತು ದೈಹಿಕ ಚಟುವಟಿಕೆಗಳ ಒಂದು ವೈಶಿಷ್ಟ್ಯವೇನೆಂದರೆ ಅಲ್ಲಿ ನೀಡಲಾಗುತ್ತಿದ್ದ ಪುರಸ್ಕಾರಗಳಿಗೆ ಹೆಚ್ಚಿನ ಭೌತಿಕ ಮೌಲ್ಯವಿರುತ್ತಿರಲಿಲ್ಲವಾದರೂ ಸಾಂಕೇತಿಕ ಮನ್ನಣೆ ಅಪಾರವಾಗಿ ಇರುತ್ತಿತ್ತು. ಲಾರಲ್ ಮರದ ಎಲೆಯನ್ನು ಬಹುಮಾನವಾಗಿ ಕೊಡುತ್ತಿದ್ದರು.

	ಗ್ರೀಸಿನಲ್ಲಿ ಅನೇಕ ಶತಮಾನಗಳ ಕಾಲ ದೈಹಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ದೊರೆಯಿತು. ರೋಮನ್ನರು ಗ್ರೀಸಿನ ಮೇಲೆ ದಂಡೆತ್ತಿ ಬಂದು ವಿಜಯಿಗಳಾದ ಅನಂತರ ಸುಮಾರು ಕ್ರಿ. ಪೂ. 186ರ ಸನಿಹದಲ್ಲಿ ರೋಮಿನ ಅನೇಕ ಪ್ರಖ್ಯಾತ ಚಕ್ರವರ್ತಿಗಳು ಈ ರೀತಿಯ ಆಟಗಳಿಗೆ ಉತ್ತೇಜನ ನೀಡಿದರು. ದೇವತೆಗಳ ಉಪಾಸನೆಯ ಅಂಗವಾಗಿಯೂ ರೋಮನ್ನರು ಅಟಪಾಟಗಳನ್ನು ವ್ಯವಸ್ಥಿತವಾಗಿ ಅಡತೊಡಗಿದರು. ಮಹಾವ್ಯಕ್ತಿಗಳ ಮೃತ್ಯು ಅಥವಾ ಯುದ್ಧದಲ್ಲಿ ಜಯ ಮೊದಲಾದ ಸಾಮಾಜಿಕ ಸಂದರ್ಭಗಳಲ್ಲಿಯೂ ಆಟಗಳನ್ನು ಅಡುತ್ತಿದ್ದರು. ರೋಮನ್ನರ ಈ ಬಗೆಗಿನ ಒಲವನ್ನು ಕಂಡು ಚುನಾವಣೆಗೆ ನಿಂತ ಹುರಿಯಾಳುಗಳು ಆಟಗಳನ್ನಾಡಿಸಿ ಜನರನ್ನು ತಮ್ಮತ್ತ ಆಕರ್ಷಿಸಲು ಪ್ರಯತ್ನಿಸುತ್ತಿದ್ದರಂತೆ. ಇವನ್ನು ನೋಡಲು ಜನತೆಯ ಅಲ್ಲದೆ ಸ್ವಯಂ ಸಾಮ್ರಾಟರು ಹಾಜರಿರುತ್ತಿದ್ದುದು ಇವುಗಳ ಅಪಾರ ಜನಪ್ರಿಯತೆಗೆ ಹಾಗೂ ರಾಜ ಮೆನ್ನಣೆಗೆ ಒಂದು ನಿದರ್ಶನ.

	ಕ್ರೈಸ್ತಧರ್ಮ ಬೆಳಕಿಗೆ ಬಂದ ಮೊದಲ ದಿನಗಳಲ್ಲಿ ಈ ಆಟಪಾಟಗಳು ಕ್ಷುದ್ರ ಧರ್ಮಿಗಳ ಪಡೆದುಕೊಂಡಿದ್ದವೆಂಬ ಕಾರಣದಿಂದ ಇವುಗಳಿಗೆ ಪ್ರೋತ್ಸಾಹ ದೊರೆಯಲಿಲ್ಲ. ಹೆಚ್ಚಾಗಿ ಸೈನ್ಯದ ತರಬೇತಿಗೆ ಸಂಬಂಧಿಸಿದ್ದ ವ್ಯಾಯಮಗಳತ್ತ ಜನ ಹೆಚ್ಚು ಮನಸ್ಸು ಕೊಡತೊಡಗಿದ್ದರು. ಊರಿನಿಂದ ಊರಿಗೆ ರಾಜಕೀಯ ಹಾಗೂ ಇತರ ಸಮಾಚಾರಗಳನ್ನು ವೇಗವಾಗಿ ಓಡುತ್ತ ಒಯ್ಯುವವರೂ ಪ್ರಸಿದ್ಧ ಆಟಗಾರರೆನಿಸಿದ್ದರು. ತುರ್ಕಿಯ ಸಂದೇಶವಾÀಹಕರು ಸಾಧಾರಣವಾಗಿ ಕಾನ್‍ಸ್ಟ್ಯಾಂಟಿನೋಪಲ್ಲಿನಿಂದ 220 ಮೈಲಿಗಳಷ್ಟು ದೂರದಲ್ಲಿದ್ದ ಏಡ್ರಿಯನೋಪಲ್ಲಿಗೆ 48 ಗಂಟೆಗಳ ಅವಧಿಯಲ್ಲಿ ಸಂದೇಶಗಳನ್ನು ಒಯ್ದು ಮುಟ್ಟಿಸುತ್ತಿದ್ದರೆನ್ನಲಾಗಿದೆ. 1932ರಲ್ಲಿ ಹಂಗರಿಯ ಲೋವಾಸ್ ಎಂಬÁತ ಬೂಡಪೆಸ್ಟ್‍ನಿಂದ ವಿಯೆನ್ನದ ವರೆಗೆ 34 ¾ ಗಂಟೆಗಳ ಅವಧಿಯಲ್ಲಿ ಓಡಿ 178 ಮೈಲಿಗಳಷ್ಟು ದೂರವನ್ನು ಕ್ರಮಿಸಿದ್ದನೆಂಬ ವರದಿಯಿದೆ. ಕೆಲವೆಡೆಗಳಲ್ಲಿ ಒಟ್ಟು ರಾಷ್ಟ್ರೀಯ ಜೀವನದಲ್ಲಿ ದೈಹಿಕ ಚಟುವಟಿಕೆಗಳು ಬಹಳ ಹಿರಿಯ ಪಾತ್ರವನ್ನು ವಹಿಸದಿದ್ದರೂ ಅವು ಸ್ಥಳೀಯ ಹಾಗೂ ವೈಯಕ್ತಿಕ ಆಸಕ್ತಿಯ ವಿಷಯಗಳಾಗಿದ್ದವು. ಅನೇಕ ಶತಮಾನಗಳ ಕಾಲ ಮನ್ನಣೆಯನ್ನು ಪಡೆದು ಮುಂದೆ ಬರುತ್ತಿದ್ದ ಇಂಥ ಚಟುವಟಿಕೆಗಳತ್ತ 17 ನೆಯ ಶತಮಾನದಲ್ಲಿ ಪ್ಯೂರಿಟನರು ಹೆಚ್ಚಿನ ಆಸಕ್ತಿ ತೋರಲಿಲ್ಲ.

	ದೈಹಿಕ ಚಟುವಟಿಕೆಗಳನ್ನು ಕುರಿತಂತೆ ಭಾರತದ ಪ್ರಾಚೀನ ನಾಗರಿಕತೆಗಳಲ್ಲೂ ಕುರುಹುಗಳು ಕಾಣದೊರೆಯುತ್ತವೆ. ಹರಪ್ಪಾ ನಾಗರಿಕತೆಯಲ್ಲಿ ಆಟಗಳನ್ನಾಡಲು ಬಳಸುತ್ತಿದ್ದ ಅನೇಕ ಉಪಕರಣಗಳು ಇಂದು ನಮಗೆ ದೊರೆತಿವೆ. ಋಗ್ವೇದದಲ್ಲೂ ಸಮನ ಎಂಬ ಒಂದು ರೀತಿಯ ಮೇಳದ ಉಲ್ಲೇಖವಿದ್ದು ಅದರಲ್ಲಿ ಸಾಮೂಹಿಕ ನರ್ತನಾದಿಗಳನ್ನು ರಾತ್ರಿಯಲ್ಲೂ ಕುದುರೆಸವಾರಿ ಸ್ಪರ್ಧೆ, ರಥಸ್ಪರ್ಧೆ ಮುಂತಾದವನ್ನು ಬೆಳಗಿನಲ್ಲೂ ನಡೆಸುತ್ತಿದ್ದರಂತೆ. ಈ ಸ್ಪರ್ಧೆಗಳಲ್ಲಿ ಜಯಶೀಲರಾಗುವವರನ್ನು ಸ್ವಯಂವರದ ಮೂಲಕ ಕನ್ಯೆಯರು ಅಲ್ಲಿಯೆ ವರಿಸುತ್ತಿದ್ದರಂತೆ. ನಮ್ಮಲ್ಲಿ ನಾಯಮಾತ್ಮಾ ಬಲಹೀನೇನ ಲಭ್ಯತೇ ಎಂಬ ಸನಾತನ ಉಕ್ತಿ ಚಾಲ್ತಿಯಲ್ಲಿತ್ತು. ದೈಹಿಕ ಚಟುವಟಿಕೆಗಳಿಂದ ದೇಹದಾಢ್ರ್ಯವನ್ನು ಬೆಳೆಸಿಕೊಳ್ಳಬೇಕೆಂಬ ಅರ್ಥದಲ್ಲಿ ಶರೀರಮಾದ್ಯಂ ಖಲು ಧರ್ಮಸಾಧನಂ ಎಂಬ ಕಾಳಿದಾಸೋಕ್ತಿಯೂ ಉಂಟು. ಧರ್ಮಾರ್ಥ ಕಾಮಮೋಕ್ಷಗಳು ಕೇವಲ ದೇಹಧಾಢ್ರ್ಯವಿದ್ದವರಿಗೆ ಮಾತ್ರ ದೊರಕುತ್ತವೆಂಬುದು ಭಾರತೀಯ ನಿಲುವು. ನಮ್ಮ ಯೋಗಾಸನಗಳು ಕೂಡ ದೈಹಿಕ ಚಟುವಟಿಕೆಗಳನ್ನು ಸಮರ್ಥವಾಗಿ ಪ್ರತಿಪಾದಿಸುವುದರಿಂದ ಇಂದು ವಿಶ್ವಾದ್ಯಂತ ಮನ್ನಣೆ ಪಡೆದಿವೆ. ಯೋಗಾಸನಗಳು ದೈಹಿಕ ಚಟುವಟಿಕೆಗಳಿಗೂ ಆಧ್ಯಾತ್ಮಕ್ಕೂ ಸ್ನೇಹಸೇತುವೆಯಂತಿವೆ.

	ಜಲವಿಹಾರ ಸಹ ಪ್ರಾಚೀನ ಭಾರತದಲ್ಲಿ ಒಂದು ಮುಖ್ಯವಾದ ಆಟವಾಗಿತ್ತೆಂದು ಭಾರತೀಯ ಪ್ರಾಚೀನ ಕಾವ್ಯಗಳಿಂದ ತಿಳಿದುಬರುತ್ತದೆ. ಕುಸ್ತಿಯಾಡುವುದು ಕೂಡ ಒಂದು ಪ್ರಮುಖ ಚಟುವಟಿಕೆಯಾಗಿತ್ತು. ಕಂಸನ ಆಸ್ಥಾನದಲ್ಲಿ ಚಾಣೂರ, ಶಲ, ತೋಷಲರೆಂಬ ಜಟ್ಟಿಗಳಿದ್ದರೆಂಬ ಬಗ್ಗೆ ಪೌರಾಣಿಕ ಕಥನಗಳಿವೆ. ಕುಸ್ತಿಕಾಳಗ, ಮಲ್ಲಯುದ್ಧಗಳ ಬಗ್ಗೆ ಕನ್ನಡ ಕಾವ್ಯಗಳಲ್ಲೂ ಹಲವಾರು ವರ್ಣನೆಗಳು ದೊರಕುತ್ತವೆ. ಮಹಾಭಾರತದ ಕಾಲದಲ್ಲಿಯೇ ಮಕ್ಕಳು ಚಿನ್ನಿ ದಾಂಡು ಆಡುತ್ತಿದ್ದ ಬಗ್ಗೆ ವರ್ಣನೆಯಿದೆ. ಮದಿಸಿದ ಆನೆಗೆ ಎದುರಾಗಿ ಹೋರಾಡಿ ಜೀವವುಳಿಸಿಕೊಳ್ಳುವ ಅಟ ಸಹ ಚಾಲ್ತಿಯಲ್ಲಿತ್ತು. ಕುದುರೆಗಳ ಮೇಲೆ ಕುಳಿತು ಮದಿಸಿದ ಆನೆಯೊಂದಿಗೆ ಸೆಣಸಾಡುವುದೂ ಒಂದು ಆಟವಾಗಿತ್ತು.

	ಬುದ್ಧನ ಕಾಲದಲ್ಲಿಯೂ ಬಹಳಷ್ಟು ರೀತಿಯ ದೈಹಿಕ ಚಟುವಟಿಕೆಗಳು ಪ್ರಚಾರದಲ್ಲಿದ್ದವು. ಓಡುವುದು, ನೆಗೆಯುವುದು, ಕುಸ್ತಿಯಾಡುವುದು ಎಲ್ಲವೂ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದ್ದವು. ಆಟಗಳನ್ನಾಡಲು ವಿಶಾಲವಾದ ಮೈದಾನಗಳು ಹಾಗೂ ಅಟಗಾರರಿಗೆ ಪ್ರತ್ಯೇಕವಾದ ಕೋಣೆಗಳು ಇರುತ್ತಿದ್ದವು. ಬಳಿಯಲ್ಲಿಯೇ ಈಜುಕೊಳ, ಸ್ನಾನಾಗಾರಗಳು ಇರುತ್ತಿದ್ದವು. ತಕ್ಷಶಿಲೆ, ನಾಲಂದಾಗಳಂಥ ನಗರಗಳಲ್ಲಿ ವಿಶ್ವವಿದ್ಯಾನಿಲಯಗಳು ಆರಂಭವಾದಾಗ ಅಲ್ಲಿಯೂ ದೈಹಿಕ ಚಟುವಟಿಕೆಗಳಿಗೆ ವಿಶೇಷ ಸ್ಥಾನವನ್ನು ಕೊಡಲಾಗಿತ್ತು. ಅದಕ್ಕೆಂದೇ ಪ್ರತ್ಯೇಕವಾದ ಶಿಕ್ಷಣ ವಿಭಾಗವಿತ್ತು. ಕುಸ್ತಿ, ಬಿಲ್ಲುವಿದ್ಯೆ, ಈಜು, ಕತ್ತಿವರಸೆ ಮುಂತಾದುವನ್ನು ಹೇಳಿಕೊಡುತ್ತಿದ್ದರು.

	ಕುದುರೆಯ ಮೇಲೆ ಕುಳಿತು ಚೆಂಡಾಡುವ ಪೋಲೊ ಮಾದರಿಯ ಕ್ರೀಡೆಯೊಂದನ್ನು ಸಹ ಆಡುತ್ತಿದ್ದರೆಂಬ ಬಗ್ಗೆ ರಾಮಾಯಣದಲ್ಲಿ ಉಲ್ಲೇಖವಿದೆ. ಪೋಲೊ ಎಂಬ ಶಬ್ದ ಟಿಬೆಟ್ಟಿನ ಭಾಷೆಯದೆಂಬ ಊಹೆ ಉಂಟು. ಇಂದು ಪ್ರಪಂಚದಲ್ಲಿ ಅತ್ಯುತ್ತಮ ಪೋಲೊ ಆಟಗಾರರೆಂದರೆ ಭಾರತೀಯರೇ. ಹಿಂದಿನ ಅರಸರ, ಸುಲ್ತಾನರ ಆಸ್ಥಾನಗಳಲ್ಲೂ ಅನೇಕ ರೀತಿಯ ಆಟಗಳನ್ನು ಆಡಿಸುತ್ತಿದ್ದರು. ಬಾಬರ್ ತನ್ನ ಸೈನಿಕರಿಗೆ ಕಪ್ಪೆ ನೆಗೆತ ಮೊದಲಾದ ಅನೇಕ ಹೊಸ ಹೊಸ ಆಟಗಳನ್ನು ಕಲಿಸಿದ್ದನಂತೆ. ಸಮರ್ಥ ರಾಮದಾಸರ ಪ್ರೋತ್ಸಾಹದಿಂದಾಗಿ ಮಹಾರಾಷ್ಟ್ರದಲ್ಲೂ ಲಾಠಿ, ಲೆಜಿûಂ, ಕುಸ್ತಿ, ಕೊಕ್ಕೊ, ಹೂತೂತು ಮುಂತಾದ ಆಟಗಳು ಚಾಲ್ತಿಗೆ ಬಂದವು. 18ನೆಯ ಶತಮಾನದ ಕೊನೆಯ ಹೊತ್ತಿಗೆ ಪೇಷ್ವೆ ಬಾಜೀರಾಯ ಅನೇಕ ಗರಡಿ ಮನೆಗಳನ್ನೂ ವ್ಯಾಯಾಮಶಾಲೆಗಳನ್ನೂ ತೆರೆಸಿದ. ಮಲಖಂ ಎಂಬ ಹೆಸರಿನ ವಿಶಿಷ್ಟವಾದ ಕುಸ್ತಿಕಲೆಯನ್ನು ಇಲ್ಲೇ ಬೆಳೆಯಿತು.

	ಭಾರತದಲ್ಲಿ 19ನೆಯ ಶತಮಾನದ ಮಧ್ಯಭಾಗದಿಂದೀಚೆಗೆ ಲಾರ್ಡ್ ಮೆಕಾಲೆಯವರ ಶಿಕ್ಷಣ ವಿಧಾನಕ್ಕನುಗುಣವಾಗಿ ಶಾಲೆಯಲ್ಲಿಯೂ ದೈಹಿಕ ಚಟುವಟಿಕೆಗಳಿಗೆ ಮಹತ್ತ್ವ ಬಂತು. ಕಬಡ್ಡಿ, ಕೊಕ್ಕೊಗಳಂಥ ಸ್ಥಳೀಯ ಆಟಗಳು ಇಂದು ರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಪಡೆದಿವೆ. ಕ್ರಿಕೆಟ್, ಹಾಕಿ, ಫುಟ್‍ಬಾಲ್‍ಗಳಂಥ ಅಂತರಾಷ್ಟ್ರೀಯ ಅಟಗಳಲ್ಲೂ ಭಾರತ ತನ್ನದೇ ಆದ ಮನ್ನಣೆಯನ್ನು ಗಳಿಸಿಕೊಂಡಿದೆ.

	19ನೆಯ ಶತಮಾನದ ಮೊದಲ ದಶಕಗಳಲ್ಲಿ ಇಂಗ್ಲೆಂಡ್ ಹಾಗೂ ಇತರ ಪಾಶ್ಚಾತ್ಯ ದೇಶಗಳ ಸಾರ್ವಜನಿಕ ಶಾಲೆಗಳಲ್ಲಿ 17ನೆಯ ಶತಮಾನದಿಂದೀಚೆಗೆ ಸ್ವಲ್ಪ ಇಳಿಮುಖವಾಗಿದ್ದ ದೈಹಿಕ ಚಟುವಟಿಕೆಗಳು ಪುನರುತ್ಥಾನ ಪಡೆದವು. 1837ರಲ್ಲಿ ಪ್ರಾರಂಭವಾದ ಕ್ವಿಕ್‍ರನ್ ಎಂಬ ಆಟ ಆಧುನಿಕ ಕಾಲದಲ್ಲಿ ನಿಯತವಾಗಿ ಅಭ್ಯಾಸಕ್ಕೊಳಗಾದ ಮೊದಲ ದೈಹಿಕ ಚಟುವಟಿಕೆ ಎಂದೆನಿಸಿಕೊಂಡಿತು. ಇದು ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಿಗೂ ಹರಡಿ ಕ್ರಮೇಣ ವ್ಯವಸ್ಥಿತವಾದ ಆಟಪಾಟಗಳಿಗೆ ನಾಂದಿಯಾಯಿತು. 1849ರಲ್ಲಿ ವೂಲ್‍ವಿಚ್‍ನ ರಾಯಲ್ ಮಿಲಿಟರಿ ಅಕಾಡೆಮಿ ಆಟಪಾಟಗಳ ವ್ಯವಸ್ಥೆಯನ್ನು ಮಾಡಲಾರಂಭಿಸಿದಂದಿನಿಂದ ದೈಹಿಕ ಚಟುವಟಿಕೆಗಳು ಹೆಚ್ಚು ಜನಪ್ರಿಯವಾದವು. 1857ರಲ್ಲಿ ಕೇಂಬ್ರಿಜ್‍ನಲ್ಲೂ 1860ರಲ್ಲಿ ಆಕ್ಸ್‍ಫರ್ಡಿನಲ್ಲೂ ಕ್ರೀಡಾಕೂಟಗಳು ಪ್ರಾರಂಭವಾದವು. 1864ರಲ್ಲಿ ಅಂತರ ವಿಶ್ವವಿದ್ಯಾನಿಲಯ ಕ್ರೀಡಾ ಚಟುವಟಿಕೆಗಳನ್ನು ನಡೆಸಲಾರಂಭಿಸಲಾಯಿತು. 1866ರಲ್ಲಿ ಇಂಗ್ಲೆಂಡಿನಲ್ಲಿ ದೈಹಿಕ ಚಟುವಟಿಕೆಗಳ ಛಾಂಪಿಯನ್‍ಷಿಪ್‍ಗಳನ್ನು ಏರ್ಪಡಿಸಿದರು. ಉಳಿದ ದೇಶಗಳು ತ್ವರಿತವಾಗಿ ಈ ಮಾದರಿಯನ್ನು ಅನುಸರಿಸಿದವು.

	ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಗಳನ್ನು ವ್ಯವಸ್ಥೆಗೊಳಿಸುವ ಮಂಡಳಿಯನ್ನು ಸ್ವಲ್ಪಕಾಲದಲ್ಲಿ ರಚಿಸಿ ಸ್ಪರ್ಧೆಗಳಿಗೆ ಸಂಬಂಧಪಟ್ಟ ನಿಯಮಗಳನ್ನು ರೂಪಿಸಿಕೊಳ್ಳಲಾಯಿತು. 1880ರಲ್ಲಿ ಅಸ್ತಿತ್ವಕ್ಕೆ ಬಂದ ಬ್ರಿಟನ್ನಿನ ಅಮೆಚೂರ್ಸ್ ಅತ್ಲೆಟಿಕ್ಸ್ ಅಸೋಸಿಯೇಶನ್ (ಎ.ಎ.ಎ.) ಹವ್ಯಾಸಿಗಳ ಹಂತದಲ್ಲಿ ನಡೆಯುವ ಎಲ್ಲಾ ಕ್ರೀಡಾ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದೆ. 19ನೆಯ ಶತಮಾನದ ಕೊನೆಯ ಭಾಗದ ಹೊತ್ತಿಗೆ ಬೇರೆ ಬೇರೆ ರಾಷ್ಟ್ರಗಳ ತಂಡಗಳ ನಡುವೆ ಅನೇಕ ಅನಧಿಕೃತ ಕ್ರೀಡಾ ಸ್ಪಧರ್Éಗಳನ್ನು ಪ್ರಾರಂಭಿಸಲಾಯಿತು. 1912ರಲ್ಲಿ ಸ್ಟಾಕ್‍ಹೋಮ್‍ನಲ್ಲಿ ನಡೆದ ಒಲಿಂಪಿಕ್ ಸ್ಪರ್ಧೆಗಳಿಂದೀಚೆಗೆ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳು ವ್ಯವಸ್ಥಿತವಾಗಿ ಅರಂಭವಾದವು. 1922 ರಿಂದೀಚೆಗೆ ಒಲಿಂಪಿಕ್ ಸ್ಪರ್ಧೆಗಳಲ್ಲಿ ಮಹಿಳೆಯರು ಭಾಗವಹಿಸತೊಡಗಿದರು. ಬ್ರಿಟನ್ನಿನ 1919ರಲ್ಲಿ ಸ್ಥಾಪನೆಗೊಂಡ ವಿಶ್ವವಿದ್ಯಾನಿಲಯಗಳ ದೈಹಿಕ ಚಟುವಟಿಕೆ ಸಂಘ ಸುಮಾರು ಹತ್ತು ವಿವಿಧ ಅಟಗಳಲ್ಲಿ ಅಂತರ ವಿಶ್ವವಿದ್ಯಾನಿಲಯ ಸ್ಪರ್ಧೆಗಳನ್ನು ಏರ್ಪಡಿಸುತ್ತಿದೆ.

	ಯೂರೊಪಿನ ಇತರ ದೇಶಗಳಲ್ಲೂ ಅಮೇರಿಕ ಸಂಯುಕ್ತಸಂಸ್ಥಾನಗಳಲ್ಲಿಯೂ ದೈಹಿಕ ಚಟುವಟಿಕೆಗಳಿಗೆ ಮಹತ್ತ್ವಪೂರ್ಣವಾದ ಸ್ಥಾನ ದೊರೆತಿದೆ. ಫ್ರಾನ್ಸಿನಲ್ಲಿ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರ್ಕಾರ ಮೊದಲಿಗೆ ಒಂದು ವಿಭಾಗವನ್ನೇ ತೆರೆದಿದ್ದು ಅದು ಇಂದು ಸಚಿವಾಲಯದ ಮಟ್ಟಕ್ಕೇರಿದೆ. ವಿಶ್ವಾದ್ಯಂತ ಹವ್ಯಾಸಿ ಕ್ರೀಡಾಪಟುಗಳ ಚಟುವಟಿಕೆಗಳನ್ನು ಸಂಘಟಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಹವ್ಯಾಸಿ ಕ್ರೀಡಾಪಟುಗಳ ಸಂಸ್ತೆಯೊಂದನ್ನು ತೆರೆಯಲಾಗಿದ್ದು ಅದರಲ್ಲಿ ರಾಷ್ಟ್ರೀಯ ಮಟ್ಟದ ಸಂಘ ಸಂಸ್ಥೆಗಳು ಪ್ರತಿನಿಧಿಗಳಗಿವೆ. ಎರಡನೆಯ ಮಹಾಯುದ್ಧಕ್ಕಿಂತ ಸ್ವಲ್ಪಮುಂಚೆ ಒಳಾಂಗಣದಲ್ಲಿ ಅಡುವ ಕ್ರೀಡಾ ಚಟುವಟಿಕೆಗಳು ವಿಶೇಷಾಗಿ ಅಮೆರಿಕದಲ್ಲಿ ಜನಪ್ರಿಯವಾದುವು. ಕೆಲವು ಸಂದರ್ಭಗಳಲ್ಲಿ ರಾತ್ರಿ ವೇಳೆಯಲ್ಲಿಯೂ ವಿಶೇಷ ಬೆಳಕಿನ ವ್ಯವಸ್ಥೆಯಲ್ಲಿ ಹೊರಾಂಗಣದ ಅಟಗಳನ್ನು ಆಡುವುದುಂಟು.

	ದೈಹಿಕ ಚಟುವಟಿಕೆಗಳಲ್ಲಿ ಮುಖ್ಯವಾಗಿ ಮೈದಾನದ ಆಟಗಳು (ಫಿಲ್ಡ್ ಇವೆಂಟ್ಸ್) ಹಾಗು ಜಾಡಿನ ಆಟಗಳು (ಟ್ರ್ಯಾಕ್ ಇವೆಂಟ್ಸ್) ಎಂಬ ಎರಡು ಮಾದರಿಗಳಿವೆ. ಮೈದಾನದ ಆಟಗಳಲ್ಲಿ ದೂರನೆಗೆತ, ಎತ್ತರನೆಗೆತ, ಕುಪ್ಪಳಿಸುತ್ತಾ ನೆಗೆಯುವುದು, ಕೈಯೂರಿಕೊಂಡು ಅಥವಾ ಗಣೆಯ ಸಹಾಯದಿಂದ ನೆಗೆಯುವುದು, ಭಾರ ಎತ್ತುವುದು, ಡಿಸ್‍ಕಸ್, ಜಾವೆಲಿನ್ ಮತ್ತು ಭಾರದ ಸುತ್ತಿಗೆಯನ್ನು (ಹ್ಯಾಮರ್) ಎಸೆಯುವುದು ಮೊದಲಾದವು ಸೇರಿವೆ. ಜಾಡಿನಲ್ಲಿ ಓಡುವ ಓಟಗಳೆಲ್ಲ ಜಾಡಿನ ಓಟಗಳಲ್ಲಿ ಸೇರುತ್ತವೆ. ದೂರ ಮತ್ತು ರೀತಿಯನ್ನು ಅನುಸರಿಸಿ ಈ ಓಟಗಳಲ್ಲಿ ಅನೇಕ ಮಾದರಿಗಳಿವೆ. ಗೊತ್ತಾದ ದೂರವನ್ನು ಬಹಳ ಜೋರಾಗಿ ಓಡುವುದು ನೂರು ಗಜಗಳ ಓಟ, ಇನ್ನೂರಿಪ್ಪತ್ತು ಗಜಗಳ ಓಟ, ಕಾಲು ಮೈಲಿಓಟ, ಅರ್ಧ ಮೈಲಿ ಓಟ, ಮೈಲಿ ಓಟ, ಮ್ಯಾರತಾನ್ ಓಟ ಮುಂತಾದ ಅನೇಕ ಓಟಗಳಿವೆ. ಇದರಲ್ಲಿ ದೂರಪ್ರದೇಶದ ಓಟ (ಕ್ರಾಸ್‍ಕಂಟ್ರಿ ರೇಸ್) ಸೇರುವುದಿಲ್ಲ. ಹೀಗೆಯೆ ಅಡಚಣೆಗಳಿಂದ ಕೂಡಿರುವ ಓಟಗಳು ಉಂಟು. ಇದೇ ರೀತಿಯಲ್ಲಿ ರಿಲೇ ಓಟಗಳು ಅಂದರೆ ತಂಡದಲ್ಲಿ ಒಬ್ಬನು ಒಂದು ಮಜಲಿನಿಂದ ಮುಂದಿನ ಮಜಲಿಗೆ ಓಡಿ ನಿಲ್ಲುವ, ಅಲ್ಲಿಯವನು ಅಲ್ಲಿಂದ ಮುಂದಿನ ಮಜಲಿಗೆ ಓಡುವ ಹೀಗೆ ಆಯಾ ತಂಡದಲ್ಲಿ ಪ್ರತಿಯೊಬ್ಬನೂ ಮುಂದಿನ ಮಜಲಿಗೆ ಓಡಿ, ಕೊನೆಗಿರುವವನ ಗುರಿಯನ್ನು ಮುಟ್ಟುವ ಕಪ್ಪೆ ಓಟದ ಪಂದ್ಯ, ನಡಿಗೆ ಓಟ ಮುಂತಾದವು ಇವೆ.

	 ಈಚಿನ ದಿನಗಳಲ್ಲಿ ಪಂದ್ಯಗಳಲ್ಲಿ ಗರಿಷ್ಠ ಸಾಧನೆಯನ್ನು ಮಾಡಿ ದಾಖಲೆಗಳನ್ನು ಸ್ಥಾಪಿಸುತ್ತಿರುವುದು ಒಂದು ಮಹತ್ತ್ವಪೂರ್ಣವಾದ ವಿಷಯ. ಒಲಿಂಪಿಕ್ ಅಟಗಳ ವಿಶ್ವದಾಖಲೆಗಳು ಇದಕ್ಕೆ ಒಂದು ನಿದರ್ಶನ. ಪ್ರತಿಯೊಂದು ರಾಷ್ಟ್ರದಲ್ಲೂ ಸಾಮಾನ್ಯವಾಗಿ ಆಟಗಾರರ ಉತ್ತೇಜನಕ್ಕಾಗಿ ಪ್ರಶಸ್ತಿಗಳನ್ನು ಏರ್ಪಡಿಸುತ್ತಿದ್ದಾರೆ.

	ದೈಹಿಕ ಚಟುವಟಿಕೆಗಳಲ್ಲಿ ಮುಖ್ಯವಾದವುಗಳ ಬಗ್ಗೆ ಪ್ರತ್ಯೇಕ ಲೇಖನಗಳಿವೆ.
	(ನೋಡಿ- ಓಟಗಳು) 	
       (ನೋಡಿ- ಕ್ರೀಡೆಗಳು)
(ಎಸ್.ಎಲ್.ಎ.) (ಪರಿಷ್ಕರಣೆ : ನಾ. ಸೋಮೆಶ್ವರ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ